ವಿವಿಧ ಆಹಾರಪದಾರ್ಥಗಳ ಪೋಷಕ ಗುಣ, ಅವುಗಳನ್ನು ಯಾವ ರೀತಿ, ಪ್ರಮಾಣದಲ್ಲಿ ಸೇರಿಸಿದರೆ ಉತ್ತಮ ಪ್ರಯೋಜನ ಪಡೆಯಬಹುದು, ಅಸಮರ್ಪಕ ಆಹಾರಪದ್ಧತಿಗಳಿಂದ ಆಗುವ ದುಷ್ಪರಿಣಾಮಗಳು, ಅದನ್ನು ತಡೆಗಟ್ಟುವ ಬಗೆ, ಈ ವಿಚಾರಗಳನ್ನು ಕುರಿತು ಇಲ್ಲಿ ಕೆಲಸ ನಡೆಯುತ್ತದೆ. ಆಹಾರ ವಸ್ತುಗಳ ರಾಸಾಯನಿಕ ಸಂಯೋಜನೆ-ಅವುಗಳಲ್ಲಿರುವ ಪ್ರೋಟೀನ್, ಕೊಬ್ಬು, ಕಾರ್ಬೊಹೈಡ್ರೇಟುಗಳು, ಲವಣಗಳು, ವಿಟಮಿನ್ಗಳು (ಜೀವಸತ್ತ್ವಗಳು) ಇವನ್ನು ಕಂಡುಕೊಂಡು, ಮಕ್ಕಳ ಮತ್ತು ವಯಸ್ಕರ ಸಮರ್ಪಕ ಬೆಳೆವಣಿಗೆ ಮತ್ತು ಆರೋಗ್ಯಕ್ಕೆ ಹೊಸಬಗೆಯ ಆಹಾರ ಸೂತ್ರಗಳನ್ನು ಸೃಷ್ಟಿಸಿ ಪರೀಕ್ಷಿಸುತ್ತಾರೆ. ಕಡಿಮೆ ಬೆಲೆಯ ಪೌಷ್ಟಿಕ ಆಹಾರಗಳನ್ನು ತಯಾರಿಸಲಾಗಿದೆ. ಇದರಿಂದ ಹೆಚ್ಚು ಬೆಲೆಯ ಪ್ರಾಣಿಮೂಲ ಪ್ರೋಟೀನ್ ಆಹಾರಗಳಿಗೆ ಬದಲು ಸಸ್ಯಮೂಲ ಆಹಾರಗಳನ್ನು ಉಪಯೋಗಿಸಬಹುದು. ಈ ವಿಭಾಗದ ಮುಖ್ಯ ಕೊಡುಗೆಗಳೆಂದರೆ: 1. ಎಮ್ಮೆ ಹಾಲಿನಿಂದ ಮಕ್ಕಳ ಆಹಾರವನ್ನು ಭಾರತದಲ್ಲೇ ತಯಾರಿಸಬಹುದೆಂದು ತೋರಿಸಿಕೊಟ್ಟದ್ದು. ಇದರ ಪರಿಣಾಮವಾಗಿ ತಯಾರಿಸಲಾದ ಅಮೂಲ್ ಡಬ್ಬದ ಹಾಲನ್ನು ದೇಶದಾದ್ಯಂತ ಮಕ್ಕಳಿಗಾಗಿ ಉಪಯೋಗಿಸಲಾಗುತ್ತಿದೆ. ಇದನ್ನು ತಯಾರಿಸಲು ಬೇಕಾದ ತಂತ್ರಜ್ಞಾನ ಮತ್ತು ಕ್ರಮವನ್ನು ಆಹಾರ ಸಂಶೋಧನಾಲಯದವರೇ ಕಂಡುಹಿಡಿದದ್ದು. ಇದಕ್ಕೆ ಮೊದಲು ಪರದೇಶಗಳಿಂದ ಹಸುವಿನ ಹಾಲಿನಿಂದ ಮಾಡಿದ ಮಕ್ಕಳ ಆಹಾರವೇ ನಮಗೆ ಸಿಗುತ್ತಿತ್ತು. ಎಮ್ಮೆ ಹಾಲು ಉಪಯೋಗಿಸಲು ಯೋಗ್ಯವಲ್ಲ ಎಂಬ ನಂಬಿಕೆಯಿತ್ತು. 2. ಬಹೂಪಯೋಗಿ ಆಹಾರದ (ಮಲ್ಟಿಪರ್ಪಸ್ ಫುಡ್) ಸೃಷ್ಟಿ. ಭಾರತದಲ್ಲಿ ಮಕ್ಕಳ ಪೋಷಣೆಗೆ ಸಾಕಷ್ಟು ಪ್ರೋಟೀನ್ ಆಹಾರ ದೊರೆಯುತ್ತಿಲ್ಲ. ಇದರಿಂದ ಅವರ ಬೆಳೆವಣಿಗೆ ಕುಂಠಿತವಾಗಿ, ರೋಗಗಳಿಗೆ ತುತ್ತಾಗುತ್ತಿದ್ದಾರೆ. ಇದನ್ನು ತಪ್ಪಿಸಲು ಕಡಲೆಕಾಯಿ ಹಿಂಡಿ, ಕೆಲವು ಬೇಳೆಗಳು, ವಿಟಮಿನ್ ಮತ್ತು ಲವಣಗಳನ್ನು ಯುಕ್ತರೀತಿಯಲ್ಲಿ ಬೆರೆಸಿ ವಿವಿಧೋಪಯೋಗಿ ಆಹಾರ ತಯಾರಿಸಲಾಯಿತು. ಇದು ಪೋಷಕಗುಣದಲ್ಲಿ ಬಹಳ ಉತ್ತಮ ರೀತಿಯದಾಗಿದೆ. ಹಲವು ತಯಾರಿಕಾ ಸಂಸ್ಥೆಗಳು ಇದನ್ನು ತಯಾರಿಸಿ ಸರ್ಕಾರಗಳಿಗೆ ಒದಗಿಸುತ್ತಿವೆ. ಇವರು ಶಾಲೆಗಳಲ್ಲಿ, ಆಸ್ಪತ್ರೆಗಳಲ್ಲಿ ಮಕ್ಕಳ ಅಭಿವೃದ್ಧಿಗೆ ಮೀಸಲಾಗಿರುವ ಸಂಸ್ಥೆಗಳಲ್ಲಿ ವಿವಿಧೋಪಯೋಗಿ ಆಹಾರದಿಂದ ತಿಂಡಿಗಳನ್ನು ಮಾಡಿಸಿ ಮಕ್ಕಳಿಗೆ ಹಂಚುತ್ತಿದ್ದಾರೆ. ಇದು ಅಪೌಷ್ಟಿಕತೆಯನ್ನು ಎದುರಿಸಲು ಸಹಾಯ ಮಾಡುತ್ತಿದೆ. 

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ